Logo

ಹತ್ತೂರು ಬಿಟ್ಟರೂ ಪುತ್ತೂರು ಬಿಡೆ ಎಂಬ ಮಾತು ಪುತ್ತೂರಿಗೆ ಇರುವ ವಿಶೇಷತೆಯನ್ನು ತೋರಿಸುತ್ತದೆ. ಈ ವಿಶೇಷತೆಗೆ ಕಾರಣ ಇಲ್ಲಿನ ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ. ಈ ಕ್ಷೇತ್ರಕ್ಕೆ ತನ್ನದೆ ಆದ ಹಲವಾರು ವೈಶಿಷ್ಟ್ಯಗಳಿವೆ.

ಬಹು ಪ್ರಾಚೀನ ಕಾಲದಲ್ಲಿ ವೇದ ವೇದಾಂತ ಪಾರಂಗತರಾದ ಶೈವ ಸಂಪ್ರದಾಯ ವಿಪ್ರರೊಬ್ಬರು ಕಾಶೀ ಕ್ಷೇತ್ರದಿಂದ ಶಿವಲಿಂಗವೊಂದನ್ನು ಪಡೆದುಕೊಂಡು ಅದನ್ನು ಅರ್ಚಿಸುತ್ತಾ ದಕ್ಷಿಣಾ ಪಥದಲ್ಲಿ ಸಂಚರಿಸುತ್ತಿದ್ದರು. ಶಿವಾರ್ಚನೆಯಲ್ಲೇ ಜೀವನವನ್ನು ಧನ್ಯವನ್ನಾಗಿ ಮಾಡಿಕೊಡಿದ್ದ ಈ ವಿಪ್ರೋತ್ತಮರು ಒಂದು ದಿನ ಗಯಾಪದ ಕ್ಷೇತ್ರವೆಂದು ಪಸಿದ್ಧವಾಗಿದ್ದ ಈಗಿನ ಉಪ್ಪಿನಂಗಡಿಗೆ ಬಂದಿದ್ದರು. ಆಗ ಈ ವೃದ್ಧ ವಿಪ್ರರನ್ನು ಭೇಟಿಯಾಗಿ ಅವರ ವ್ಯಕ್ತಿತ್ವದಿಂದ ಆಕರ್ಷಿತರಾದ ವಿಪ್ರರೊಬ್ಬರು ಅವರಲ್ಲಿ ಕುಶಲ ಪ್ರಶ್ನೆಗಳನ್ನು ಹಾಕಿದರು. ಕಾಶಿಯಿಂದ ಬಂದಿದ್ದ ವೃದ್ಧ ಬ್ರಾಹ್ಮಣರು ಪುತ್ತೂರಿಗೆ ಬರುವರೆಂದು ತಿಳಿದು ಬಂದುದರಿಂದ ಇಬ್ಬರಲ್ಲೂ ಆತ್ಮೀಯತೆ ಬೆಳೆಯಿತು.

ತನ್ನ ಮಧ್ಯಾಹ್ನದ ಭೋಜಕ್ಕಿಂತ ಮೊದಲು ಶಿವಲಿಂಗಾರ್ಚನೆಯನ್ನು ಸಂಪ್ರದಾಯವನ್ನಾಗಿಟ್ಟುಕೊಂಡಿದ್ದ ಆ ವೃದ್ಧ ವಿಪ್ರರು ತನ್ನ ಸಂಪುಟದಿಂದ, ಸೂರ್ಯಪ್ರಭೆಯಿಂದ ಕಂಗೊಳಿಸುವ ಸುಂದರಾಕೃತಿಯ ಶಿವಲಿಂಗವೊಂದನ್ನುತೆಗೆದು ಗೋವಿಂದ ಭಟ್ಟರ ಕೈಗಿತ್ತು ಇದನ್ನು ಕೈಯಲ್ಲಿಟ್ಟುಕೋಂಡೇ ಪೂಜಿಸಬೇಕೆಂದು ತಿಳಿಸಿ, ತಾವು ಕುಮಾರಧಾರಾ ನದಿಗೆ ಸ್ನಾನಕ್ಕೆಂದು ಹೋದರು. ಎಷ್ಟು ಸಮಯ ಕಳೆದರೂ, ಅವರು ಹಿಂದಿರುಗದಿದ್ದುದನ್ನು ನೋಡಿ, ಬಲವಾಗಿ ಕರೆದರೂ, ಮರುತ್ತರ ಬಾರದಿರುವುದನ್ನು ಕಂಡು ಈ ಶಿವಲಿಂಗವನ್ನು ತೆಗೆದುಕೊಂಡು, ಸೂರ್ಯಸ್ತಮಾನಕ್ಕಿಂತ ಮೊದಲು ಪುತ್ತೂರನ್ನು ತಲುಪಿದರು. ಇಲ್ಲಿ ವಿಶ್ರಾಂತಿಯನ್ನು ತೆಗೆದುಕೊಂಡರು.

ಮರುದಿನ, ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಪುತ್ತೂರಿನಲ್ಲಿ ಅರುಣೋದಯಕ್ಕೆ ಜಾಗೃತರಾದ ಈ ದ್ವಿಜರು ಶೌಚಾದಿಗಳನ್ನು ಮುಗಿಸಿ ಶಿವನ ಸೋಮವಾರದ ವಿಶೇಷ ಪೂಜೆಗೆ ಬೇಕಾದ ಸಾಹಿತ್ಯಗಳನ್ನು ಸಂಗ್ರಹಿಸುವುದಕ್ಕಾಗಿ ಬಂಗರ ಆರಮನೆಗೆ ಹೋದರು. ಜೈನ ಧರ್ಮದಲ್ಲಿ ಅತೀ ನಿಷ್ಠೆಯನ್ನು ಹೊದಿದ್ದ ಬಂಗರಾಯನು ಈ ವಿಪ್ರೋತ್ತಮರ ಬರವನ್ನು ಮನಸಃ ಗಮನಿಸಿಕೊಳ್ಳಲಿಲ್ಲ. ತನ್ನ ಸಹೋದರಿಯು ಪ್ರಸವ ವೇದನೆಯಿಂದ ನರಳುತ್ತಿದ್ದುದರಿಂದ ಬಂಗರಾಯನು ದುಃಖಾಕ್ರಾಂತನಾಗಿದ್ದನು.

ಬಂಗರಸನ ಪ್ರಧಾನಿಯು ಆ ಬ್ರಾಹ್ಮಣನ ನಡವಳಿಕೆಯನ್ನೂ, ಮುಖತೇಜಸ್ಸನ್ನೂ ಕಂಡು ನಿರಾಸೆಯಲ್ಲಿದ್ದರೂ, ಏನಾದರೂ ಆಧಾರ ಸಿಗಬಹುದೋ, ಎಂಬ ಆಸೆಯಿಂದ ಆತನಲ್ಲಿ ತಮ್ಮ ಕಷ್ಟವನ್ನು ನಿವೇದಿಸಿಕೊಂಡಾಗ, ದಿವ್ಯ ಜ್ನಾನಿಯಂತಿದ್ದ, ಆ ಬ್ರಾಹ್ಮಣನು ತನ್ನಲ್ಲಿದ್ದ ಶಿವಲಿಂಗಕ್ಕೆ ನಮಸ್ಕರಿಸಿ, "ನಿನ್ನಿಚ್ಚೆಯಂತೆ ಆಗಲಿ, ಮಹೇಶ್ವರಾ" ಎಂದು ಪ್ರಾರ್ಥಿಸಿಕೊಂಡು ಬಂಗರಾಜನ ಸಹೋದರಿಗೆ ಪುತ್ರವತಿಯಾಗೆಂದು ಹರಸಿದನು. ಆವ್ಯಾಜ ಕರುಣಾಮೂರ್ತಿಯಾದ ಶಿವನ ದಯೆಯೋ, ಸತ್ಯನಿಷ್ಠ ಬ್ರಾಹ್ಮಣನ ಪ್ರಾರ್ಥನೆಯ ಬಲವೋ ಎಂಬಂತೆ ಬಂಗರಸನ ಸಹೋದರಿಯು ಗಂಡು ಮಗುವನ್ನು ಪ್ರಸವಿಸಿದಳು. ಬಂಗರಸನೂ, ಪ್ರದಾನಿಯೂ, ಊರಿನ ಜನರೂ ಬ್ರಾಹ್ಮಣನ ತಪಶ್ಯಕ್ತಿಗೆ ಬೆರಗಾಗಿ ಅವನಿಗೆ ಶಿರಸಾ ವಂದಿಸಿದರು. ಶಿವಾರ್ಚನೆಗೆ ಬೇಕಾದ ಸರ್ವ ವಿಧದ ಸಾಮಾಗ್ರಿಗಳನ್ನೂ ಕೊಟ್ಟರು.

ಶಿವಾರ್ಚನೆಯೇ ಉಸಿರಾಗಿರುವ ಆ ಬ್ರಾಹ್ಮಣೋತ್ತಮನು ಮುಖ ಕ್ಷೌರವನ್ನು ಮಾಡಿಕೊಂಡು ಇಲ್ಲಿನ ಕೆರೆಯಲ್ಲಿ ಮಿಂದು ಮರೆತೋ, ತಿಳಿಯದೆಯೋ ಶಿವಲಿಂಗವನ್ನು ಭೂಮಿಯಿಂದ ಮೇಲೆತ್ತಿ ತನ್ನ ಸಂಪುಟ (ಪೆಟ್ಟಿಗೆ)ಕ್ಕೆ ಹಾಕಿಕೊಳ್ಳಲು ಪ್ರಯತ್ನಿಸಿದನು. ಶಿವಲಿಂಗವು ಮೇಲೆ ಬರಲಿಲ್ಲ. ಇನ್ನಷ್ಟು ಶಕ್ತಿಯಿಂದ ಮೇಲೆತ್ತಲು ಪ್ರಯತ್ನಿಸಿದರೂ, ಲಿಂಗವನ್ನು ಕದಲಿಸುವುದಕ್ಕಾಗಲಿಲ್ಲ. ಕೋಪದಂದ ತನ್ನ ಪೂರ್ಣ ಶಕ್ತಿಯನ್ನು ಉಪಯೋಗಿಸಿದರೂ, ಶಿವಲಿಂಗವು ಗಟ್ಟಿಯಾಗಿಯೇ ನೆಲವನ್ನು ಹಿಡಿದುಕೊಂಡಿತ್ತು.

ಶಿವಾಪರಾಧವಾಯಿತೆಂದು ಬ್ರಾಹ್ಮಣೋತ್ತಮನು ಕಕ್ಕಾಬಿಕ್ಕಿಯಾದನು. ದುಃಖಿತನಾದನು. ಅಶ್ರುಧಾರೆಯೂ ಹರಿಯಿತು. ಗದ್ಗದ ಕಂಠದಿಂದ ಶಿವನನ್ನು ಸ್ತುತಿಸಿದನು. ಆದರೆ ದೈವನಿರ್ಣಯವನ್ನು ಬಲ್ಲವರಾರು? ಲಿಂಗರೂಪಿ ಮಹಾದೇವನು ಪುತ್ತೂರಿನ ಪುಣ್ಯಭೂಮಿಯಲ್ಲೇ ನೆಲೆಸಲು ಸಂಕಲ್ಪ ಮಾಡಿದ್ದನು.

ಹತ್ತಾರು ಜನ ಸೇರಿ, ಶಿವಲಿಂಗವನ್ನು ಕೀಳಲು ಪ್ರಯತ್ನಿಸಿದರು. ಪುತ್ತೂರಿನ ಜನರ ನಿರ್ಮಳಾಂತಃಕರಣದಲ್ಲಿ ಆಗಲೇ ನೆಲೆಯಾಗಿದ್ದ ಮಹಾದೇವನು, ಬಾಹ್ಯ ಪ್ರಯತ್ನಗಳಿಗೆ ಒಳಗಾಗಿ ನೆಲೆಬಿಟ್ಟು ಮೇಲೇಳಲಿಲ್ಲ. ಲಿಂಗರೂಪಿಯಾದ ಮಹಾದೇವನು ಪುತ್ತೂರಿನಲ್ಲೇ ಪ್ರಸನ್ನನಾಗಿ ನೆಲೆ ನಿಲ್ಲುವ ಭವ್ಯ ಭವಿಷ್ಯದ ಕಲ್ಪನೆಯೇ ಇಲ್ಲದ ಜನರು ಬಂಗರಸನ ಸಿಪಾಯಿಗಳನ್ನು ಕರೆದು ಲಿಂಗವನ್ನು ಕೀಳಲು ಮತ್ತೋಮ್ಮೆ ಪ್ರಯತ್ನಿಸಿದರು. ಆಳುಕಾಳು ಪರಿಜನರು ಪುರ ಜನರು, ಪಟ್ಟ ಎಲ್ಲಾ ಪ್ರಯತ್ನಗಳೂ ನಿಷ್ಪ್ರಯೋಜಕವಾದವು.

ಬಂಗರಸನ ಭೀಮಬಲದ ಗಜರಾಜನನ್ನು ಕರೆತಂದು ಸರಪಳಿಯಿಂದ ಶಿವಲಿಂಗವನ್ನು ಬಿಗಿದು, ಆನೆಯಿಂದ ಲಿಂಗವನ್ನು ಎಳೆಸಲಾಯಿತು; ದೂಡಿಸಲಾಯಿತು. ಆಗ ಕಿರಿದಾದ ಶಿವಲಿಂಗವು ಭೂಮರೂಪವನ್ನು ತಾಳಿ ಮಹಾಲಿಂಗನಾಗಿ, ಮಹಾಲಿಂಗೇಶ್ವರನಾಗಿ ಕಂಗೊಳಿಸಿದನು. ಭಕ್ತಜನರಿಗೆ ಮಂಗಲಕರ ಶಿವನಾಗಿ ಶೋಭಿಸಿದನು; ದುಷ್ಟರಿಗೆ ರುದ್ರರೂಪಿ, ಪ್ರಳಯಂತಕನಾಗಿ ಪ್ರಜ್ವಲಿಸಿದನು. ಇದಾವುದನ್ನು ಗಮನಿಸದ ಆಜ್ನಾನಿ ಆನೆಯು ಇನ್ನೂ ಶಿವಲಿಂಗವನ್ನು ಎಳೆಯುತ್ತಿದ್ದುದರಿಂದ ನೋವಿನಿಂದ ಭಯಂಕರವಾಗಿ ಘೀಳಿಡುತ್ತಾ ಮಂದರಗಿರಿಯೇ ಧರೆಗುರುಳುವಂತೆ ಧೊಪ್ಪನೆ ಬಿದ್ದಿತು. ಆಗ, ಆನೆಯ ಆಂಗಾಗಳು ಛಿದ್ರೋಪಛಿದ್ರಗೊಂಡು ದೂರದೂರುಗಳಿಗೆ ಎಸೆಯಲ್ಪಟ್ಟವು ಆನೆಯ ಕೊಂಬು ಬಿದ್ದ ಸ್ಥಳವು ಮುಂದೆ ಕೊಂಬೆಟ್ಟು ಎಂದು ಕರೆಯಲ್ಪಟ್ಟಿತು. ಅದರಂತೆ ಕರಿ ಬಿದ್ದಲ್ಲಿ ಕರಿಯಾಲ, ಕಾಲು ಬಿದ್ದಲ್ಲಿ ಕಾರ್ಜಾಲ, ಕೈ ಬಿದ್ದಲ್ಲಿ ಕೈಪಳ, ಬಾಲ ಬಿದ್ದಲ್ಲಿ ಬೀದಿಮಜಲು ತಲೆ ಬಿದ್ದಲ್ಲಿ ತಾಲೆಪ್ಪಾಡಿ, ಬೆನ್ನು ಬಿದ್ದಲ್ಲಿ ಬೆರಿಪದವು ಎಂಬ ಹೆಸರುಗಳಾದವು. ಆನೆ ಬಿದ್ದ ಹೊಂಡವೇ ಕೆರೆಯಾಗಿ ಆ ಕೆರೆಯ ನೀರು ಗಜ ಸಂತತಿಗೆ ವಿಷಪ್ರಾಯವಾಗಿ, ಇಂದಿಗೂ ಆ ನೀರನ್ನು ಆನೆಗಳಿಗೆ ಕುಡಿಸುವಂತಿಲ್ಲ.

ಸರ್ವ ಕಾರ್ಯಗಳಿಗೂ ಕಾರಣನಾದ ಶ್ರೀ ಮಹಾಲಿಂಗೇಶ್ವರನನ್ನು ಆಗ ಭಕ್ತಿಭಾವದಂದ ಮಹಾದೇವನೆಂದು ಸ್ತುತಿಸಲಾಯಿತು. ಆಗಮೋಕ್ತ ಪದ್ಧತಿಯಲ್ಲಿ ಅರ್ಚಿಸಲಾಯಿತು. ಮಂತ್ರ ಜಲಾಭಿಷೇಕವನ್ನು ಗೈದು ತುಂಬೆ, ಕರವೀರಾದಿ ಪುಷ್ಪಗಳಿಂದಲೂ, ನಾರಿಕೇಳ ರಂಭಾದಿ ಫಲಗಳಿಂದಲೂ, ಬಿಲ್ವಪತ್ರಾದಿ ಪತ್ರಗಳಿಂದಲೂ, ಕರ್ಪೂರ, ಅಗರು, ಚಂದನಾದಿ ಸುಗಂಧ ದ್ರವ್ಯಗಳಿಂದಲೂ ಪೂಜಿಸಲಾಯಿತು. ಸುಪ್ರಸನ್ನನಾದ ಶಿವನು ಮಂಗಳಕರನಾಗಿ ಮಹಾಲಿಂಗೇಶ್ವರನಾಗಿ ಪುತ್ತೂರಿನ ಪುಣ್ಯಭೂಮಿಯಲ್ಲಿ ನೆಲೆಸಿದನು.

ದೇವಳದಲ್ಲಿ ಮೂರು ಶಾಸನಗಳಿವೆ. ಹನ್ನೆರಡನೆಯ ಶತಮಾನದ ವಿಜಯನಗರ ಅರಸರ ಕಾಲದ ಶಾಸನದಲ್ಲಿ ದೇವಳಕ್ಕೆ ಉಂಬಳಿ ಬಿಟ್ಟ ಗದ್ದೆ ಬೆಳೆ ಕಾಣಿಕೆ, ಆಡಳಿತಗಾರನ ಬಗ್ಗೆ ವಿವರವಿದೆ. ೧೨ ಶತಮಾನದೆನ್ನಲಾದ ಶಾಸನದಲ್ಲಿ ಮುತ್ತು ಬೆಳೆಯುವ ಕೆರೆಯಲ್ಲಿ ಮೀನು ಹೀಡಿಯುವುದು ನಿಷಿದ್ಧವೆನ್ನಲಾಗಿದೆ. ಇನ್ನೂ ಓದಲು ಬಾಕಿ ಇರುವ ಒಂದು ಶಾಸನ ಇರುತ್ತದೆ. ಅಲ್ಲದೇ ವೀರಗಲ್ಲು, ಮಾಸ್ತಿಕಲ್ಲು ಇರುತ್ತದೆ.

ಈ ದೇವಳವು ಪಟ್ಟಣದ ಮಧ್ಯ ಇದ್ದು, ದೇವಳದ ಈಶಾನ್ಯದಲ್ಲಿ ಶಿವಪ್ರೀತಿಯಾದ ಸ್ಮಶಾನ, ಪಶ್ಚಿಮದಲ್ಲಿ ಕೆರೆ ಇದೆ. ಈ ಕೆರೆಗೆ ಭಕ್ತಾದಿಗಳಿಗೆ ಇಳಿಯಲು ಅವಕಾಶವಿರುವುದಿಲ್ಲ. ಈ ಕೆರೆಯಲ್ಲಿರುವ ಮೀನುಗಳಿಗೆ ಹುರಿಯಕ್ಕಿ ಹಾಕಿದಲ್ಲಿ ಚರ್ಮವ್ಯಾದಿ ಗುಣವಾತ್ತದೆ ಎಂಬ ಪ್ರತೀತಿ ಇದೆ.

ವ್ಯವಸ್ಥಾಪನಾ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿಯವರು ೧೩-೦೬-೨೦೧೨ ರಂದು ದೇವಳದ ತಂತ್ರಿಗಳಿಂದ ಗರ್ಭಗುಡಿಯಲ್ಲಿ ಮರದ ಪಂಜರದಲ್ಲಿ ಅನುಜ್ಞಾ ಕಲಶದ ಮೂಲಕ ಸಂಕೋಚಗೊಳಿಸಿ ಬಾಲಾಲಯ ಪ್ರತಿಷ್ಠೆಗೊಂಡ ಶ್ರೀ ಮಹಾಲಿಂಗೇಶ್ವರನನ್ನು ದೇವಳದ ಜೀರ್ಣೋದ್ಧಾರ ಪುನರ್ ನಿರ್ಮಾಣ ಕಾಮಗಾರಿ ಸಂಪೂರ್ಣವಾದ ಬಳಿಕ ದಿನಾಂಕ ೧೩-೦೫-೨೦೧೩ ರಂದು ಮೂಲ ಗರ್ಭಗುಡಿಯಲ್ಲಿ ಪುನಃ ಪ್ರತಿಷ್ಠೆ ಗೊಳಿಸಲಾಯಿತು. ದಿ: ೧೬-೦೫-೨೦೧೩ ರಂದು ಬ್ರಹ್ಮಕಲಶೋತ್ಸವ ನಡೆಸಲಾಯ್ತು.

ಪ್ರಧಾನ ಗರ್ಭಗುಡಿ ಹಾಗೂ ಪ್ರಾಕಾರ ಗುಡಿಗಳ ಶಿಲಾಮಯ ಅಧೀಷ್ಠಾನ ಹಾಗೂ ಭಿತ್ತಿಯಲ್ಲಿ ಭಿತ್ತಿಸ್ತಂಭ, ಪಂಜರಕೋಷ್ಠ, ಜಾಲಕ, ನಂದಿಸಾಲು, ಸರಿಪಳಿ, ತಿರುಗುವ ಚೆಂಡು, ಸಿಂಹಗಳು ಇತ್ಯಾದಿಗಳ ಉಬ್ಬುಚಿತ್ರಗಳ ರಚನೆ ಇರುತ್ತದೆ.

ಪ್ರಧಾನ ಗರ್ಭಗುಡಿ ಹಾಗೂ ಪ್ರಾಕಾರ ಗುಡಿಗಳ ಮರದ ದೀಪದಳಿಯಲ್ಲಿ ಕ್ಷೇತ್ರದ ಇತಿಹಾಸ, ಶಿವಪುರಾಣ, ನವಗ್ರಹ, ಅಷ್ಠದಿಕ್ಪಾಲಕರು, ದ್ವಾದಶಾಧಿತ್ಯರು, ಗಜಪಕ್ಷಿ, ನಟರಾಜನ ೧೦೮ ವಿವಿಧ ಭಂಗಿ, ನಂದಿಸಾಲು, ತ್ರಿಶೂಲ, ಶಿವಲಿಂಗ, ಗಣಪತಿಯ ೩೨ ಭಂಗಿಗಳು ನಾಗಬಂಧ, ತಿರುಗುವ ಚೆಂಡು, ಪುತ್ತೂರಿನ ೧೦ ಚೋದ್ಯಗಳು ಇತ್ಯಾದಿಗಳ ಉಬ್ಬುಚಿತ್ರಗಳ ರಚನೆ ಇರುತ್ತದೆ.

ತುಲಾಭಾರ ಸೇವೆ ಮಾಡಿಸಿದಲ್ಲಿ ಸಂತಾನಪಾಪ್ತಿ, ಮಾನಸಿಕ ಅಸ್ವಸ್ಥರಿಗೆ ಕೆರೆಯ ನೀರಿನ ಕಲಸ ಸ್ನಾನ ಹಾಗೂ ಉದ್ಯೋಗ, ವಿವಾಹ ಯೋಗಕ್ಕೆ ಪಲ್ಲಕ್ಕಿ ಸೇವೆ ಹಾಗೂ ರುದ್ರಾಭಿಷೇಕ, ಏಕಾದಶರುದ್ರಾ, ಶತರುದ್ರಾಭಿಷೇಕ ಸೇವೆ ಮಾಡಿಸಿದಲ್ಲಿ ಲೌಕಿಕ ಇಷ್ಟಾರ್ಥಗಳು ಲಭಿಸುತ್ತದೆ.

ಪುತ್ತೂರು ಮಹಾಲಿಂಗೇಶ್ವರ ಕೇವಲ ಪುತ್ತೂರಿಗೆ ಮಾತ್ರವಲ್ಲ ಹತ್ತೂರಿಗೂ ಒಡೆಯ, ಕಾಶಿಯನ್ನು ಬಿಟ್ಟರೆ ದೇವಾಲಯದ ಎದುರು ಸ್ಮಶಾನ ಇರುವ ಮತ್ತೊಂದು ದೇವಲಾಯವೆಂದರೆ ಅದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ. ಪುತ್ತೂರಿನ ಜನರ ದೈನಂದಿನ ದಿನಚರಿ ಮಹಾಲಿಂಗೇಶ್ವರನ ನಾಮ ಸ್ಮರಣೆಯಿಲ್ಲದೆ ಪ್ರಾರಂಭವಾಗುವುದಿಲ್ಲ. ಪುತ್ತೂರಿನ ಜನರು ಜಗತ್ತಿನಲ್ಲಿ ಎಲ್ಲೆ ಇರಲಿ ಅವರ ಮನೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಭಾವಚಿತ್ರಕ್ಕೆ ನಿತ್ಯ ಪೂಜೆ ಸಲ್ಲುತ್ತದೆ.